ಬೆಂಗಳೂರು, ಡಿ.೨: ಆರ್ಥಿಕವಾಗಿ ದಿವಾಳಿಯಾಗಿರುವ ರಾಜ್ಯ ಸರಕಾರ ಸರಕಾರಿ ನೌಕರರಿಗೆ ವೇತನ ನೀಡಲು ಸಾಧ್ಯವಾಗದಂತಹ ಸ್ಥಿತಿಗೆ ತಲುಪಿದೆ. ಈ ಪರಿಸ್ಥಿತಿಯಿಂದ ಪಾರಾಗಲು ತನ್ನ ಭದ್ರತಾ ಠೇವಣಿಗಳನ್ನು ಆರ್ಬಿಐ ಮುಖಾಂತರ ನಗದಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಬಜೆಟ್ ನಿಗದಿತ ವೆಚ್ಚದ ನಂತರವೂ ಹಣವನ್ನು ಕಾಯ್ದಿರಿಸಲಾಗುತ್ತಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಆರಂಭದ ದಿನಗಳಲ್ಲಿ ಉತ್ತಮವಾಗಿದ್ದ ಆರ್ಥಿಕ ಸ್ಥಿತಿ ನಂತರ ಹದಗೆಟ್ಟಿದೆ ಎಂದು ಟೀಕಿಸಿದರು.
ವೇತನ ನೀಡಲು ಸರಕಾರದಿಂದ ಸಾಧ್ಯವಾಗುತ್ತಿಲ್ಲ. ಆರ್ಥಿಕ ಮುಗ್ಗಟ್ಟಿನಿಂದ ನರಳುತ್ತಿರುವ ರಾಜ್ಯ ಸರಕಾರ ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಮೌಲ್ಯದ ಭದ್ರತಾ ಠೇವಣಿಗಳನ್ನು ಆರ್ಬಿಐ ಮೂಲಕ ನಗದಾಗಿಸಿಕೊಂಡು ಸಾಲ ರೂಪದಲ್ಲಿ ಸಾಲ ಪಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಂಡಾಯ ಅಭ್ಯರ್ಥಿಗಳಿಗೆ ಎಚ್ಚರಿಕೆ: ವಿಧಾನ ಪರಿಷತ್ನ ಚುನಾವಣೆಯಲ್ಲಿ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿರುವ ಬಂಡಾಯ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆಯಬೇಕು ಎಂದು ದೇಶಪಾಂಡೆ ಎಚ್ಚರಿಕೆ ನೀಡಿದ್ದಾರೆ.
ಧಾರವಾಡದ ಸುಭಾಷ್ ದ್ಯಾವಕ್ಕನವರ್, ಬಿಜಾಪುರದಲ್ಲಿ ಮಾಜಿ ಶಾಸಕ ಶಿವಾನಂದ ಪಾಟೀಲ್, ಗುಲ್ಬರ್ಗದ ತಿಪ್ಪಣ್ಣ ಕಮಕನೂರ ಮತ್ತು ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಓರ್ವ ವ್ಯಕ್ತಿ ಬಂಡಾಯ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಎಲ್ಲರ ಮನವೊಲಿಸುವ ಕೆಲಸ ನಡೆಯುತ್ತಿದೆ, ಪಕ್ಷದ ಅಣತಿಯಂತೆ ನಡೆಯದಿದ್ದರೆ ಬಂಡಾಯಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ವಿಧಾನ ಪರಿಷತ್ನ ಪ್ರತಿಪಕ್ಷದ ನಾಯಕ ವಿ.ಎಸ್.ಉಗ್ರಪ್ಪ ವೈಯಕ್ತಿಕ ಕಾರಣಗಳಿಂದ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹೇಳಿ ಹಿಂದೆ ಸರಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರೆ ಖುದ್ದಾಗಿ ಉಗ್ರಪ್ಪನವರ ಸ್ಪರ್ಧೆಯ ಕುರಿತು ಆಸಕ್ತಿ ತೋರಿಸಿದ್ದರು ಎಂದು ದೇಶಪಾಂಡೆ ಹೇಳಿದರು. ಕಾಂಗ್ರೆಸ್ನಲ್ಲಿ ಉಗ್ರಪ್ಪ ಉನ್ನತ ನಾಯಕರಾಗಿದ್ದು, ಅವರನ್ನು ನಿರ್ಲಕ್ಷಿಸುವ ಪ್ರಶ್ನೆ ಉದ್ಭವಿಸುವುದಿಲ್ಲ, ಮುಂದಿನ ದಿನಗಳಲ್ಲಿ ಪಕ್ಷ ಅವರಿಗೆ ಸೂಕ್ತ ಸ್ಥಾನ ಕಲ್ಪಿಸಲಿದೆ ಎಂದು ಅವರು ಹೇಳಿದರು.
ಕಾರವಾರದ ಜಿಲ್ಲಾ ಕಾಂಗ್ರೆಸ್ ವಿಧಾನ ಪರಿಷತ್ನಲ್ಲಿ ದೇಶಪಾಂಡೆಯವರು ಸ್ಪರ್ಧಿಸಬೇಕು ಎಂದು ಒಂದು ಸಾಲಿನ ನಿರ್ಣಯ ಕೈಗೊಂಡಿತ್ತು. ಆದರೆ, ತಮಗೆ ಆಸಕ್ತಿ ಇಲ್ಲದಿದ್ದರಿಂದ ಬೇರೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಸಲಾಗಿದೆ ಎಂದು ಅವರು ಹೇಳಿದರು.